ಕಾನಡಾ ಧುರೀಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಕಟವಾಗುತ್ತಿದ್ದ ಒಂದು ವಾರಪತ್ರಿಕೆ. 1918 ರಲ್ಲಿ ಸ್ಥಾಪಿತ. ಈ ಪತ್ರಿಕೆಯನ್ನೂ ಇದರ ಮುದ್ರಣ ಪ್ರಕಾಶನಗಳಿಗಾಗಿ ಶ್ರೀರಾಮಕೃಷ್ಣ ಪ್ರಿಂಟಿಂಗ್ ಪ್ರೆಸ್ಸನ್ನೂ ಏಕಕಾಲದಲ್ಲಿ ಒಂದು ಖಾಸಗಿ ಪರಿಮಿತ ಸಹಕಾರಿ ಸಂಸ್ಥೆಯಾಗಿ ಆರಂಭಿಸಲಾಯಿತು. ವ್ಯವಸ್ಥಾಪಕರಾಗಿದ್ದವರು ಗಣಪತಿರಾವ್ ಮಾಸೂರ್‍ಕರ್. ಇವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಚಳವಳಿಯ ಆದ್ಯ ಪ್ರವರ್ತಕರಲ್ಲಿ ಒಬ್ಬರು. ಅರಣ್ಯ ಸಂಕಷ್ಟ ನಿವಾರಣೆಗಾಗಿ ಹೋರಾಡಿದವರು. ಇವರು ನಿವೃತ್ತಿ ಹೊಂದಿದ ಅನಂತರ ಸದಾಶಿವರಾವ್ ಮಾಸೂರ್‍ಕರ್ ಪತ್ರಿಕೆಯ ಅಂತ್ಯದ ವರೆಗೂ ವ್ಯವಸ್ಥಾಪಕರಾಗಿದ್ದರು. ಈ ಪತ್ರಿಕೆಯ ಆರಂಭದ ಮೂರು ವರ್ಷ ಕಾಲ ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್‍ಗಳಲ್ಲಿ ಲೇಖನಗಳು ಪ್ರಕಟವಾಗುತ್ತಿದ್ದುವು. ರಾಮರಾವ್ ಎಸ್. ನಾಡಕರ್ಣಿ, ರಾಮರಾವ್ ಭಟಕಳಕರ, ಎಸ್. ಎಸ್. ಶಾಸ್ತ್ರಿ ಮತ್ತು ಜಿ. ಅಣ್ಣಾಜಿರಾವ್ ಅನುಕ್ರಮವಾಗಿ ಅದರ ಸಂಪಾದಕರಾಗಿದ್ದರು. ಮುಂದೆ ಗಣೇಶ ರಾಮಯಾಜಿಯವರು ಪತ್ರಿಕೆ ನಿಲ್ಲುವ ತನಕ ದೀರ್ಘ ಕಾಲ ಅದರ ಸಂಪಾದಕರಾಗಿದ್ದರು. ಅಖಿಲ ಕರ್ಣಾಟಕದಲ್ಲಿ ಪ್ರಚಾರ-ಪ್ರತಿಷ್ಠೆ ದೊರೆತು ಅದು ಕರ್ಣಾಟಕ ಧುರೀಣವಾಗಿ ಪರಿವರ್ತನೆಗೊಂಡಿತು. ಅದು ಪರಿಷ್ಕøತ ಕನ್ನಡ ಶೈಲಿ, ದೊಡ್ಡ ಆಕಾರದ ರಚನೆ ಮತ್ತು ವಿಷಯಪ್ರೌಢಿಮೆಗಳಿಂದ ಜನಾದರಣೀಯವಾಗಿತ್ತು. ಉಗ್ರ ರಾಷ್ಟ್ರೀಯ ಸಂಪಾದಕೀಯ ಪ್ರಕಟಣೆಗಾಗಿ 1934ರ ಸುಮಾರಿಗೆ ಯಾಜಿ ಅವರಿಗೆ ಬ್ರಿಟಿಷ್ ಸರ್ಕಾರ ಒಂದು ತಿಂಗಳ ಜೈಲುಶಿಕ್ಷೆ ವಿಧಿಸಿತು. ಅನಂತರ ಕರ್ಣಾಟಕ ಧುರೀಣ ಮತ್ತೆ ಹೊರಡಲಿಲ್ಲ. ಯಾಜಿ ಅವರು ನಿವೃತ್ತರಾಗಿ ಚಿಕ್ಕಮಗಳೂರಿಗೆ ಹೋಗಿ ನೆಲೆಸಿದರು. 

 ಧುರೀಣ ಸಾಪ್ತಾಹಿಕ 1928ರ ಸುಮಾರಿಗೆ ಒಂದು ಸರ್ವಾಂಗ ಸುಂದರ ವಿಶೇಷಾಂಕವನ್ನು ಹೊರಡಿಸಿತ್ತು. 1952-54ರಲ್ಲಿ ಕರ್ಣಾಟಕ ಧುರೀಣ ಹೊಸ ವ್ಯವಸ್ಥಾಪನೆಯ ಅಡಿಯಲ್ಲಿ ಕೆಲಕಾಲ ಮತ್ತೆ ಪ್ರಕಟವಾಗುತ್ತಿತ್ತು. ಆಗ ಜಿ. ಆರ್. ಹೆಗ್ಗಡೆ ಮತ್ತು ರಾಮಚಂದ್ರ ವಾಲಗಳ್ಳಿ ಇವರು ಅನುಕ್ರಮವಾಗಿ ಅದರ ಸಂಪಾದಕರಾಗಿದ್ದರು.     

(ಜಿ.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ